ಅಡ್ಡಗೂಡಣೆ

	
ವೈದ್ಯದಲ್ಲಿ, ಎರಡು ರಕ್ತನಾಳಗಳ (ಧಮನಿಗಳು, ಸಿರಗಳು), ಜಠರ ಕರುಳುಗಳ ಇಲ್ಲವೇ ನರಗಳ ನಡುವೆ ಆಗಿರುವ ಸಂಬಂಧ ಕಲ್ಪನೆ. ಕರುಳಲ್ಲೋ ಜಠರದಲ್ಲೋ, ವಿಷಮಗಂತಿ ಹುಣ್ಣಿಗಾಗಿ ಆ ಭಾಗವನ್ನು ಪೂರ್ತಿ ತೆಗೆದು ಹಾಕಿದಾಗ ಆಹಾರ ಮುಂದೆ ಸಾಗಿಸುವಂತೆ, ಶಸ್ತ್ರಕ್ರಿಯೆಯಿಂದ ಸಹಜವಾಗಿ ದೂರವಿರುವ ಕರುಳುಗಳಂಥ ಪೊಳ್ಳುಗಳನ್ನೋ, ಅಂಗಗಳನ್ನೋ ಕೂಡಿಸುವ ದಾರಿ ಮಾಡುವುದುಂಟು. ಅದೇ ಅಡ್ಡಗೂಡಣೆ (ಅನಾಸ್ಟಮೋಸಿಸ್).
	
ಧಮನಿಗಳು ಕವಲೊಡೆದು ಕಿರಿಯ ಶಾಖೆಗಳಾಗುತ್ತ ಹೋದಂತೆಲ್ಲ ಪಕ್ಕದವೊಂದಿಗೆ ಕೂಡಿಕೊಳ್ಳುತ್ತವೆ. ಆದರೆ ಪುಪ್ಪುಸ, ತೊರಳೆ, ಮೂತ್ರಪಿಂಡ, ಕಣ್ಣಿನ ಕಣ್ಜಾಲ (ರೆಟೀನ), ಮಿದುಳು, ಗುಂಡಿಗೆಗಳ ಧಮನಿಗಳು ಹೀಗೆ ಒಂದರೊಡನೊಂದು ಕೂಡದಿರುವುದರಿಂದ ಎಲ್ಲಾದರೂ ಒಂದು ಕವಲಿಗೆ ಆತಂಕವಾದರೂ ರಕ್ತ ಮುಂದೆ ಹರಿಯದೆ ಆ ಭಾಗವೇ ಸಾಯುತ್ತದೆ. ಸಿರಗಳಲ್ಲಿ ಹೀಗಾಗದು. ಇವು ಒಂದಕ್ಕೊಂದು ಬಹಳ ಕಡೆಗಳಲ್ಲಿ ಕೂಡುತ್ತವೆ. ಈಲಿಯೊಳಕ್ಕೆ ರಕ್ತ ಸಾಗಿಸುವ ದೊಡ್ಡ ಸಿರ ಮಾತ್ರ ಇದಕ್ಕೆ ಹೊರತು. ಕಿರೀಕಿರಿಯ ಧಮನಿಗಳಿಗೂ ಸಿರಗಳಿಗೂ ನಡುವೆ ಲೋಮನಾಳಗಳು ಮೈಯಲ್ಲಿ ಎಲ್ಲೆಲ್ಲೂ ಅಡ್ಡಗೂಡಿಸುತ್ತವೆ. ಒಂದು ಅಂಗದ ನರ ಕೆಟ್ಟಿದ್ದರೆ, ಪಕ್ಕದಲ್ಲಿರುವ ಬೇರೊಂದು ನರವನ್ನು ಇದಕ್ಕೆ ಅಡ್ಡಗೂಡಿಸಿದರೆ ಅದಕ್ಕೆ ತಗಲಿರುವ ಸ್ನಾಯುಗಳು ಮತ್ತೆ ಚಲಿಸುವಂತಾಗುತ್ತವೆ.										
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ